ಕೋಳಿ ರೋಗಗಳು

ಇವನ್ನು ಗಾಯಗಳು, ಭೇದಿ, ಸಾಂಸರ್ಗಿಕ ರೋಗಗಳು ಎಂದು ಮೂರು ಸ್ಥೂಲವರ್ಗಗಳಾಗಿ ವಿಭಾಗಿಸಬಹುದು.

	ಗಾಯಗಳು: ಕೋಳಿ ಹಾರಿ ಜಿಗಿದು ಬಿರುಸಾದ ಜಾಗದಲ್ಲಿ ಕುಳಿತರೆ ಅಂಗಾಲುಗಳಿಗೆ ಪೆಟ್ಟು ತಗಲಿ ಮೊದಲು ಚಿಕ್ಕ ಗಾಯವಾಗಿ ಮುಂದೆ ಕೀವು ತುಂಬಿ ಹೆಚ್ಚು ನೋವಾಗಬಹುದು. ಇದರಿಂದ ಅದು ತಿಂಡಿ ತಿನ್ನುವುದನ್ನೂ ನೀರು ಕುಡಿಯುವುದನ್ನೂ ತೊರೆಯುತ್ತದೆ ಮತ್ತು ನೋವಿನಿಂದ ಸೊರಗುತ್ತದೆ. ಇದಕ್ಕೆ ಯೋಗ್ಯ ಚಿಕಿತ್ಸೆ ಅಗತ್ಯ. ಇಂಥ ಗಾಯಗಳು ಆಗದಂತೆ ನಿವಾರಣೋಪಾಯಗಳು ಪರಿಣಾಮಕಾರಿ ಆಗುತ್ತವೆ. ಕೋಳಿಯ ಎದೆಯ ಮೇಲೆ ಗಾಯ ಆಗದಂತೆ ವಿಶೇಷ ಎಚ್ಚರಿಕೆವಹಿಸಬೇಕು. ಎದೆಯ ಮೂಳೆಯನ್ನು ಕೊರೆಯದಂಥ ತಿಂಡಿಯ ಮತ್ತು ನೀರಿನ ಪಾತ್ರೆಗಳನ್ನು ಉಪಯೋಗಿಸುವುದು ಒಳ್ಳೆಯದು. ಕಾಲುಗಳು ನಿಶ್ಯಕ್ತವಾದಾಗ ಕೋಳಿ ತನ್ನ ಎದೆಯ ಮೇಲೆ ಕೂತುಕೊಳ್ಳುವುದುಂಟು. ಇದು ಸಂಭವಿಸದಂತೆ ನೋಡಿಕೊಳ್ಳಬೇಕು. ಕೋಳಿಯ ಆಹಾರ ಸಮತೂಕವಾಗಿರುವಂತೆ ನೋಡಿಕೊಂಡಾಗ ಕಾಲುಗಳು ಬಲಿಷ್ಠವಾಗಿದ್ದು ಎದೆಯ ಮೇಲೆ ಕೂರುವ ಸಂದರ್ಭ ಒದಗುವುದಿಲ್ಲ.

	ಭೇದಿ ರೋಗ: ಇದು ಆರಂಭವಾಗಲು ಕೆಲವು ಮುಖ್ಯ ಕಾರಣಗಳು ಹೀಗಿವೆ-1.ಕೋಳಿಗಳು ಕುಡಿಯುವ ನೀರಿನಲ್ಲಿ ಲವಣಾಂಶ ಹೆಚ್ಚಾಗಿರುವುದು. 2.ತಿಂಡಿಯಲ್ಲಿ ಕಾಕಂಬಿಯ ಭಾಗ ಹೆಚ್ಚಾಗಿರುವುದು. 3.ಉಪಯೋಗಿಸುವ ಮೀನಿನ ಪುಡಿಯಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವುದು. 4. ನೀರಿನ ಪಾತ್ರೆಯನ್ನು ಚೆನ್ನಾಗಿ ಉಜ್ಜದಿದ್ದಾಗ ಅದರೊಳಗೆ ಬೆಳೆದ ಹಾವಸೆ ಮಿಶ್ರಿತ ನೀರನ್ನು ಕುಡಿಯುವುದು. 5.ಅನ್ನನಾಳಿಕೆಯ ರೋಗ. 6.ಜಂತುಹುಳುಗಳ ಏರಿಕೆ.

	ರಕ್ತಭೇದಿ: ಇದು ಚಿಕ್ಕ ಮರಿಗಳಲ್ಲಿ ಹೆಚ್ಚಾಗಿರುವುದು. 2.ವಾರದ ವಯಸ್ಸಿನಿಂದ 12 ವಾರದ ವಯಸ್ಸಿನವರೆಗೆ ಇರುವ ಕೋಳಿಗಳ ಗುಂಪುಗಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಬಳಲುವ ಕೋಳಿಮರಿಗಳು ಮುದುಡಿಕೊಂಡು ರೆಕ್ಕೆಗಳನ್ನು ಜೋತುಬಿಟ್ಟಿರುತ್ತವೆ. ಕುತ್ತಿಗೆಯನ್ನು ಒಳಗೆ ಬಗ್ಗಿಸಿಕೊಂಡು ತೂಕಡಿಸುತ್ತಿರುತ್ತವೆ. ಆಹಾರಸೇವನೆಯನ್ನು ನಿಲ್ಲಿಸಿಯೇ ಬಿಡುತ್ತವೆ. ಈ ರೋಗವನ್ನು ಸೂಕ್ತ ಔಷಧಿಗಳ ಅನುಪಾನದಿಂದ ಗುಣಪಡಿಸಬೇಕು. 

	ಸಾಂಸರ್ಗಿಕ ರೋಗಗಳು: 1 ರಾಣಿಕೇತ ಅಥವಾ ಕೊಕ್ಕರೆರೋಗ-ಇದು ಎಲ್ಲ ವಯಸ್ಸಿನ ಕೋಳಿಗಳಿಗೂ ತಗಲುವುದುಂಟು. ಒಮ್ಮೆ ಬಂದರೆ ಪಿಡುಗಿನಂತೆ ಹಬ್ಬಿ ಎಲ್ಲ ಕೋಳಿಗಳನ್ನೂ ಧ್ವಂಸಮಾಡುತ್ತದೆ. ತೂಕಡಿಕೆ, ತುರಾಯಿ ಮತ್ತು ಪದರಗಳು ಕಳೆಗುಂದಿರುವಿಕೆ ಮತ್ತು ಉಸಿರಾಟದಲ್ಲಿ ಆಗುವ ತೊಂದರೆ ಮತ್ತು ಸದ್ದು ಈ ವ್ಯಾಧಿಯ ಲಕ್ಷಣಗಳು. ಹಸಿರಾದ ಮತ್ತು ಕೆಟ್ಟ ವಾಸನೆಯ ಭೇದಿಯಿಂದ ಕೋಳಿ ಸಂಕಟಪಡುತ್ತಿರುತ್ತದೆ.

	2 ಪಾಶ್ರ್ವವಾಯು: ಈ ಕಾಯಿಲೆಯಿಂದ ಕೋಳಿಯ ಕುತ್ತಿಗೆ ಒಂದು ಕಡೆ ತಿರುಗಬಹುದು ಅಥವಾ ಒಂದು ಕಡೆ ಮುದುಡಿಕೊಳ್ಳಬಹುದು. ಒಂದು ಕಾಲು ಅಥವಾ ಎರಡು ಕಾಲುಗಳು ಪಾಶ್ರ್ವನೋವಿನಿಂದ ಬಳಲುತ್ತಿರಬಹುದು. ಕಾಲಿಗೆ ಪಾಶ್ರ್ವವಾಯು ಬಂದಾಗ ಕೋಳಿ ನಿಲ್ಲಲು ಸಾಧ್ಯವಾಗದ್ದರಿಂದ ಅದು ಒಂದೇ ಕಡೆ ಬೀಳುವುದು. ರೋಗಬಂದಮೇಲೆ ಚಿಕಿತ್ಸೆ ಅಪ್ರಯೋಜಕ. ಆದ್ದರಿಂದ ಮುನ್ನೆಚ್ಚರಿಕೆ ಅವಶ್ಯ.

	3 ಮೈಲಿಬೇನೆ: ಬೇಸಗೆ ಕಾಲದಲ್ಲಿ ಈ ಬೇನೆ ಕೋಳಿಗಳಿಗೆ ತಗಲುವ ಸಂಭವವುಂಟು. ವಯೋಪರಿಮಿತಿ ಇಲ್ಲ. ಈ ರೋಗದಿಂದ ಕೋಳಿಗಳು ಅಶಕ್ತವಾಗಿ ಉತ್ಪನ್ನ ಕಡಿಮೆಯಾಗುವುದು. ಕೋಳಿಗಳ ತುರಾಯಿ ಅಥವಾ ಜುಟ್ಟುಗಳಲ್ಲಿ ಮತ್ತು ಪದರಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು ಮೈಲಿಬೇನೆಯ ಲಕ್ಷಣ. ಬಾಯಿಯ ಸಂದಿನಲ್ಲಿ ಮತ್ತು ಕಾಲುಬೆರಳುಗಳ ಸಂದಿನಲ್ಲಿ ಸಹ ಈ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಇವು ಕಣ್ಣುಗಳ ಮೇಲೆ ಆದರೆ ಕಣ್ಣುನೋವಿನಿಂದ ಕುರುಡು ಸಂಭವಿಸುವುದು. ಮುಂದೆ ಈ ಗುಳ್ಳೆಗಳು ಕೀವು ತುಂಬಿಕೊಂಡು ಅನಂತರ ಒಣಗಿ ಕರ್ರಗೆ ಆಗುವುವು.

	4 ನೆಗಡಿ: ಹವಾಪರಿಸ್ಥಿತಿಯಲ್ಲಿ ತೀವ್ರ ಬದಲಾವಣೆ ತಲೆದೋರಿದರೆ, ಸ್ವಲ್ಪವೇ ಜಾಗದಲ್ಲಿ ಕೋಳಿಗಳು ಹೆಚ್ಚು ಸಂಖ್ಯೆಯಲ್ಲಿದ್ದರೆ, ಲಿಟ್ಟರ್ ತೇವವಾಗಿದ್ದರೆ ಗಾಳಿಸಂಚಾರತ ಚೆನ್ನಾಗಿಲ್ಲದಿದ್ದರೆ, ಲಿಟ್ಟರಿನಲ್ಲಿ ಮಲ ತುಂಬಿ ಅಮೋನಿಯ ವಾಸನೆ ಹೆಚ್ಚುತ್ತಿದ್ದರೆ ಆಗೆಲ್ಲ ಕೋಳಿಗಳಿಗೆ ನೆಗಡಿರೋಗ ಆಗುವ ಸಂಭವವುಂಟು. ಆಹಾರದಲ್ಲಿ ವಿಟಮಿನ್ನುಗಳ ಅಂಶ ಕಡಿಮೆ ಇದ್ದಾಗ ಸಹ ಈ ರೋಗ ತಲೆದೋರುವುದುಂಟು. ಕಣ್ಣು ಮೂಗುಗಳಿಂದ ನೀರು ಸೋರುತ್ತದೆ. ಕಣ್ಣುಗಳು ಮತ್ತು ತಲೆ ಊದಿಕೊಳ್ಳುತ್ತವೆ. ಆಗ ಕೋಳಿಗಳು ತಿಂಡಿ ತಿನ್ನುವುದು ಕಡಿಮೆ ಮಾಡುತ್ತವೆ.

	5 ಸ್ಟೈರೋಕೀಟ ಗ್ಯಾಲಿನೇರಮ್: (ಈಚೆಗೆ ಬೊರಿಲ್ಲಾ ಗ್ಯಾಲಿನೇರಮ್ ಎಂದು ಕರೆಯಲಾಗಿದೆ) ಎಂಬ ಜೀವಿಯಿಂದ ಕೋಳಿಗಳಲ್ಲಿ ಸ್ಟೈರೋಕೀಟ ರೋಗ ಉತ್ಪತ್ತಿಯಾಗುತ್ತದೆ. ಈ ಜೀವಿಯ ಅನೇಕ ಸಮೀಪ ಸಂಬಂಧಿಗಳು ಮನುಷ್ಯ ಮತ್ತು ಪ್ರಾಣಿಗಳಲ್ಲಿ ರೋಗ ಉತ್ಪತ್ತಿ ಮಾಡುತ್ತವೆ. ಅವುಗಳಲ್ಲಿ ಮನುಷ್ಯನ ಪರಂಗಿ (ಸಿಫಿಲಿಸ್) ರೋಗಕ್ಕೆ ಕಾರಣವಾದ ಟ್ರಪೊನಿಮ ಪಲ್ಲಿಡ ಕೂಡ ಒಂದು. ಏಕಕೋಶ ಜೀವಿಗಳ ವಂಶದಲ್ಲಿ ಹಿಂದೆ ಸೇರಿಸಲಾಗಿದ್ದ ಸ್ಟೈರೋಕೀಟ ಜೀವಿ ಈಗ ಬ್ಯಾಕ್ಟೀರಿಯ ಎಂದು ಸ್ಪಷ್ಟಪಡಿಸಲಾಗಿದೆ. ಪಕ್ಷಿಗಳ ದೇಹಗಳನ್ನು ಸ್ಟೈರೋಕೀಟ ಆಕ್ರಮಿಸಿದಾಗ ಅವುಗಳಲ್ಲಿ ಭೇದಿ ಕಂಡುಬಂದು, ಕ್ರಮೇಣ ಹಸಿವು ಅಡಗಿ, ತಲೆಯ ಶಕ್ತಿ ಕುಗ್ಗುತ್ತ ಅಂತ್ಯದಲ್ಲಿ ವಾಯುರೋಗದಿಂದ ಸಾಯುತ್ತವೆ. ಕೆಲವು ವೇಳೆ ದೀರ್ಘಾವಧಿ ನರಳುವುದೂ ಉಂಟು. ಅಂಥ ಸಂದರ್ಭಗಳಲ್ಲಿ ಪಕ್ಷಿಗಳು ಪಾಶ್ರ್ವವಾಯು ರೋಗಕ್ಕೆ ತುತ್ತಾಗಿ ಕ್ರಮೇಣ ಕೃಶವಾಗಿ ಹದಿನೈದು ದಿವಸಗಳಲ್ಲಿ ಸಾವಿಗೀಡಾಗುತ್ತವೆ. ಕೋಳಿಗಳ ಮೇಲೆ ಜೀವಿಸುವ ಆರ್ಗಸ್ ಪರ್ಸಿಕಸ್ ಎಂಬ ಜಾತಿಯ ಉಣ್ಣಿಗಳಿಂದ ಈ ರೋಗ ಹರಡಲ್ಪಡುತ್ತದೆ. ರೋಗಾಣುಜೀವಿಗಳನ್ನುಳ್ಳ ಉಣ್ಣಿ ತನ್ನ ಮೊಟ್ಟೆಗಳ ಮೂಲಕ ರೋಗಾಣು ಜೀವಿಯನ್ನು ತನ್ನ ಮರಿಗಳಿಗೆ ಸಾಗಿಸಿ ಅವುಗಳಿಂದ ಪುನಃ ಇತರ ಪಕ್ಷಿಗಳಿಗೆ ಹರಡಿಸಬಹುದು. 
												(ಎಸ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ